ಎತಿರಿಜ್, ಸರ್ ಜಾರ್ಜ್
	1635-1691. ರೆಸ್ಟೊರೇಷನ್ ಕಾಲದ ನಾಟಕಕಾರ ಹಾಗೂ ನುಡಿಜಾಣ. ನ್ಯಾಯಶಾಸ್ತ್ರದಲ್ಲೂ ತಕ್ಕಮಟ್ಟಿಗೆ ಪರಿಣಿತ. ಮೇಡನ್‍ಹೆಡ್ಡಿನಲ್ಲಿ ಜನಿಸಿದ. ಕಾನ್‍ಸ್ಟ್ಯಾಂಟಿನೋಪಲಿನಲ್ಲಿ ರಾಜನಿಯೋಗಿಯ ಕಾರ್ಯದರ್ಶಿಯಾಗಿ ಕೆಲಸಮಾಡಿದನಲ್ಲದೆ ತನ್ನ ಕೊನೆಯ ವರ್ಷಗಳನ್ನು ಪಾನ ಪ್ರಣಯಗಳಲ್ಲಿ ಕಳೆದ. ಈತ ಪ್ಯಾರಿಸಿನಲ್ಲಿ ಅಸುನೀಗಿದಂತೆ ತೋರುತ್ತದೆ. ಈತ ಅನೇಕ ರೆಸ್ಟೊರೇಷನ್ ನಾಟಕಗಳನ್ನು ಬರೆದಿದ್ದಾನೆ. ದಿ ಕಾಮಿಕಲ್ ರಿವೆಂಜ್ ಅಥವಾ ಲವ್ ಇನ್ ಎ ಟಬ್, ಷಿ ವುಡ್ ಇಫ್ ಷಿ ಕುಡ್ ಮತ್ತು ದಿ ಮ್ಯಾನ್ ಆಫ್ ಮೋಡ್ ಎಂಬ ನಾಟಕಗಳಲ್ಲಿ ಆಗಿನ ಕಾಲದ ಸಮಾಜವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾನೆ. ಈ ಮೂರು ನಾಟಕಗಳೂ ಆಗಿನ ಕಾಲದಲ್ಲಿ ಬಹು ಜನಪ್ರಿಯವಾಗಿದ್ದವು. ಒಳಸಂಚು, ಗುಪ್ತ ಪ್ರಣಯಗಳ ಬಗ್ಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಥಮ ಬಾರಿಗೆ ನಾಟಕಗಳನ್ನು ಬರೆದ ಕೀರ್ತಿ ಈತನಿಗೆ ಸಲ್ಲುತ್ತದೆ. ಈ ದಾಟಿಯಲ್ಲೇ ಮುಂದೆ ಷೆರಿಡನ್ ಮತ್ತು ಗೋಲ್ಡ್‍ಸ್ಮಿತ್ ಎಂಬ ನಾಟಕಕಾರರು ತಮ್ಮ ನಾಟಕಗಳನ್ನು ರಚಿಸಿದರು. ಫ್ರೆಂಚ್ ನಾಟಕಕಾರನಾದ ಮೋಲಿಯರನ ಪ್ರಭಾವವನ್ನು ಎತಿರಿಜ್‍ನಲ್ಲಿ ಕಾಣಬಹುದು.													
(ವಿ.ಪಿ.)
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ